ನದೀಹರಣ -
ಒಂದು ನದಿ ಅಥವಾ ನದೀವ್ಯವಸ್ಥೆ ಮತ್ತೊಂದು ನದಿಯ ಇಲ್ಲವೆ ನದೀ ವ್ಯವಸ್ಥೆಯ ನೀರನ್ನು ಅಪಹರಿಸಿ ಬೆಳೆದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಕ್ರಿಯೆ (ರಿವರ್ ಪೈರೆಸಿ; ಸ್ಟ್ರೀಮ್‍ಕ್ಯಾಪ್ಚರ್). ದೊಡ್ಡ ನದಿ ತನ್ನ ಉಪನದಿಗಳೊಂದಿಗೆ ಕೂಡಿಕೊಂಡು ಮುಂದೆ ಸಾಗಿದಂತೆ ಬೇರೆ ಪ್ರವಾಹಗಳ ಜಲಾನಯನ ಪ್ರದೇಶವನ್ನು ಆಕ್ರಮಿಸುತ್ತದೆ. ಹೀಗಾದಾಗ ನೀರಿನ ಹರಿವಿನ ಜಾಡೇ ಬದಲಾಯಿಸಿ ಹೋಗಬಹುದು. ಒಂದೇ ಪ್ರದೇಶದಲ್ಲಿ ಹುಟ್ಟಿ ಬೇರೆ ಬೇರೆ ದಿಕ್ಕುಗಳಿಗೆ ಹರಿಯುವ ಎರಡು ನದೀಮೂಲಗಳು ಹಿಂಜರಿದು ಒಂದಕ್ಕೊಂದು ಸಂಧಿಸಿದಾಗ ಇವುಗಳಲ್ಲಿ ಪ್ರಬಲವಾದ ನದಿ ದುರ್ಬಲವಾದ ನದಿಯನ್ನು ತನ್ನ ಪಾತ್ರಕ್ಕೆ ಸೆಳೆದುಕೊಳ್ಳುತ್ತದೆ. ಒಂದು ವೇಳೆ ನದಿಯಲ್ಲಿ ತುಂಬು ನೀರಿದ್ದು ಅದರ ಪಾತ್ರ ಬಹಳಷ್ಟು ಇಳಿಜಾರಾಗಿದ್ದು ಮೃದುಶಿಲೆಗಳಿಂದಲೂ ಕೂಡಿದ್ದರೆ ಈ ಕ್ರಿಯೆ ಸುಲಭವಾಗಿ ಸಾಗುತ್ತದೆ. ಇದರಿಂದ ಅಡಿಯಲ್ಲಿರುವ ಕಣಿವೆಗೆ ಭಾದೆ ಇಲ್ಲವಾದರೂ ಅದರಲ್ಲಿರುವ ನೀರಿನ ಪರಿಮಾಣ ಬಹಳಷ್ಟು ಕಡಿಮೆ ಆಗುವುದು. ಉದಾಹರಣೆಗೆ, ಒಂದು ದೊಡ್ಡ ಕಣಿವೆಯಲ್ಲಿ ಬಲುಚಿಕ್ಕತೊರೆ ಹರಿಯುತ್ತಿದ್ದರೆ ಅಥವಾ ಒಂದು ದಿಣ್ಣೆಯ ಪ್ರದೇಶದಲ್ಲಿ ನೀರು ಹರಿಯದೆ ಇರುವ ವಿ-ಆಕಾರದ ಕಡಿದಾದ ದಡಗಳುಳ್ಳ ಕಣಿವೆಯಿದ್ದರೆ ಅಲ್ಲಿ ನದೀಹರಣವಾಗಿದೆ ಎನ್ನಬಹುದು. ಒಂದು ನದಿ ತಾನು ಕೊರೆದ ಕಾಲುವೆಯನ್ನು ತೊರೆದಾಗ ಆ ಕಾಲುವೆಗೆ ನೀರುಕಂಡಿ, ಜಲರಂಧ್ರ (ವಾಟರ್‍ಗ್ಯಾಪ್) ಎಂದು ಮುಂತಾಗಿ ಹೆಸರುಗಳಿವೆ. ನದೀಹರಣದ ಪರಿಣಾಮವಾಗಿ ನೀರನ್ನು ಕಳೆದುಕೊಂಡ ಕಣಿವೆಯ ಕಿರಿದಾದ ಭಾಗಕ್ಕೆ ಗಾಳಿಕಂಡಿ (ವಿಂಡ್‍ಗ್ಯಾಪ್) ಎಂದು ಹೆಸರು. ಹಿಮಾಲಯ ಪ್ರದೇಶ ಮತ್ತು ದಕ್ಷಿಣ ಭಾರತಗಳಲ್ಲಿ ನದೀಹರಣದ ಉತ್ತಮ ನಿದರ್ಶನಗಳನ್ನು ಕಾಣಬಹುದು.						(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ